ರಾಜ್ಯದಲ್ಲಿ ಚುನಾವಣೆಗೆ ಮೊದಲು ನೀಡಿದಂತಹ ಭರವಸೆಗಳನ್ನು ಈಡೇರಿಸಿದ್ದನ್ನು ನಾವು ಸ್ವಾಗತಿಸುತ್ತೇವೆ. ಇನ್ನು ಮುಂದೆ ಯೋಜನೆಯನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ತರುವ ಕೆಲಸ ಆಗಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಹೇಳಿದ್ದಾರೆ. ದೆಹಲಿಯಲ್ಲಿ ಸಿ ಟಿ ರವಿ ಅವರು ಮಾದ್ಯಮಗಳ ಮುಂದೆ ಮಾತನಾಡುತ್ತಾ, ಪ್ರಣಾಳಿಕೆಯಲ್ಲಿ ಮುದ್ರಿಸಿರುವಂತೆ ಪ್ರತಿ ವ್ಯಕ್ತಿ ಅಂತಾ ಹೇಳಿದ್ದರು. ಆದರೆ ಈಗ ಅವುಗಳ ಘೋಷಣೆ ವೇಳೆ ಕುಟುಂಬಕ್ಕೆ ಅಂತಾ ಹೇಳಿದ್ದಾರೆ.
ರಾಜ್ಯದ ಆರ್ಥಿಕ ಸ್ಥಿತಿಗತಿಗೆ ಸಂಬಂಧಿಸಿದಂತೆ ಶ್ವೇತ ಪತ್ರ ಹೊರಡಿಸಿ ಮತ್ತು ಖರ್ಚು ವೆಚ್ಚ ಸೇರಿ ಯೋಜನೆಗಳಿಗೆ ಎಷ್ಟು ಹಣ ಎನ್ನುವ ಮಾಹಿತಿಯನ್ನು ಕೊಡಿ ಎಂದು ಕೇಳಿದ್ದಾರೆ. ಮಾತು ಮುಂದುವರೆಸಿದ ಅವರು ಚಾಲ್ತಿಯಲ್ಲಿ ಇರುವ ಯೋಜನೆಗಳಿಗೆ ತಗಲುವ ವೆಚ್ಚದ ಬಗ್ಗೆ ತಿಳಿಸಿ ಎಂದು ಕೇಳಿದ್ದಾರೆ. ರಾಜ್ಯದ ಜನರು ಆರ್ಥಿಕ ವೆಚ್ಚದ ಒಂದು ನಿಲುವಿಗೆ ಬರಬೇಕಾಗಿದೆ. ಶ್ರೀಲಂಕಾ, ಪಾಕಿಸ್ತಾನದಂತಹ ಪರಿಸ್ಥಿತಿಗೆ ಕರ್ನಾಟಕ ಬರಬಾರದು ಎಂದು ಅವರು ಕಾಳಜಿಯನ್ನು ಮೆರೆದಿದ್ದಾರೆ.
ನಿಮ್ಮ ಗ್ಯಾರಂಟಿಗಳು ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಆಗೋದು ಬೇಡ. ನಿಮ್ಮ ಗ್ಯಾರಂಟಿಗಳು ನಿಯಮಗಳಿಗೆ ಒಳಪಟ್ಟು ಕೊಟ್ಟ ಹಾಗೆ ಆಗಬಾರದು ಎಂದಿದ್ದಾರೆ. ಆಗ ಚುನಾವಣಾ ಫಲಿತಾಂಶದ 24 ಗಂಟೆ ಅಂತ ಹೇಳಿದ್ದರು. ನಂತರ ಜನರ ಸಿಟ್ಟಿನ ನಂತರ ತಡವಾಗಿ ಘೋಷಣೆ ಮಾಡಿದ್ದಾರೆ. ನಾನಿದನ್ನು ಸ್ವಾಗತಿಸುತ್ತೇನೆ. ಜನಪರ ಯೋಜನೆ ಘೋಷಣೆ ಮಾಡಿದ್ದಾರೆ. ಆದರೆ ಇದಕ್ಕೆ ಹಣದ ಮೂಲ, ಹಣದ ಕ್ರೋಡೀಕರಣ, ಎಷ್ಟು ವರ್ಷ ಇರುತ್ತೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದಿದ್ದಾರೆ.