ದಕ್ಷಿಣ ಭಾರತದ ಖ್ಯಾತ ನಟಿ, ಮೂಲತಃ ಕನ್ನಡದ ನಟಿಯಾಗಿರುವ ಪ್ರಿಯಾಮಣಿ ತಮ್ಮ ಮದುವೆ ವಿಚಾರವಾಗಿ ಈಗಾಗಲೇ ಸಾಕಷ್ಟು ಬಾರಿ ಸುದ್ದಿಯಾಗಿದ್ದಾರೆ. ಅವರ ಮದುವೆಯ ವಿಚಾರವಾಗಿ ಅವರನ್ನು ಸಾಕಷ್ಟು ಟ್ರೋಲ್ ಮಾಡಲಾಗಿದೆ. ನಟಿ ಪ್ರಿಯಾಮಣಿ ಕೂಡಾ ತಮ್ಮ ಮದುವೆಯ ವಿಚಾರವಾಗಿ ಎಂದೂ ಮುಕ್ತವಾಗಿ ಮಾತನಾಡಿರಲಿಲ್ಲ. ನಟಿಯು ಮುಸ್ಲಿಂ ಸಮುದಾಯಕ್ಕೆ ಸೇರಿದ ಹುಡುಗನನ್ನು ಮದುವೆಯಾಗಿದ್ದಾರೆ ಎನ್ನುವ ಕಾರಣಕ್ಕಾಗಿ ಅವರನ್ನು ಸಾಕಷ್ಟು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡಲಾಗಿತ್ತು.
ಲವ್ ಜಿಹಾದ್ ಮಾತುಗಳನ್ನು ಸಹಾ ನಟಿ ಎದುರಿಸಬೇಕಾಯಿತು. ಆದರೆ ಇದೇ ಮೊದಲ ಬಾರಿಗೆ ಅವರು ಬೇರೆ ಭಾಷೆಯ ಮಾಧ್ಯಮ ಒಂದರಲ್ಲಿ ಇಂತಹ ವಿಚಾರಗಳ ಕುರಿತಾಗಿ ಮಾತನಾಡಿದ್ದಾರೆ. ನಟಿ ಪ್ರಿಯಾಮಣಿ 2017ರಲ್ಲಿ ತಾವು ಇಷ್ಟಪಟ್ಟು, ಪ್ರೀತಿಸಿದ ಮುಸ್ತಫಾ ಎನ್ನುವವರ ಜೊತೆಗೆ ರಿಜಿಸ್ಟರ್ ಮದುವೆಯಾದರು. ಮದುವೆಯಾದ ಆರಂಭದಲ್ಲೇ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಗಿ ಬಂತು. ಅಲ್ಲದೇ ಮುಸ್ತಫಾ ಅವರಿಗೆ ಅದು ಎರಡನೇ ಮದುವೆಯಾಗಿದ್ದ ಕಾರಣ ಈ ವಿಚಾರವಾಗಿಯೂ ಪ್ರಿಯಾಮಣಿಯವರನ್ನ ಅನೇಕರು ಟಾರ್ಗೆಟ್ ಮಾಡಿದರು.
ಸಾಕಷ್ಟು ಬೇಸರ ಮತ್ತು ಅಸಮಾಧಾನವನ್ನು ಸಹಿಸಿದ್ದ ನಟಿ ಈಗ ಮೊದಲ ಬಾರಿಗೆ ಈ ಎಲ್ಲಾ ವಿಚಾರಗಳ ಬಗ್ಗೆ ಮಾತನಾಡುತ್ತಾ, ನಮ್ಮಲ್ಲಿ ಎಲ್ಲಾ ಮುಸ್ಲಿಮರನ್ನು ಉಗ್ರರಂತೆ ನೋಡಲಾಗುತ್ತೆ. ಅವರಿಗೆ ಹುಟ್ಟುವ ಮಕ್ಕಳು ಜಿಹಾದಿಗಳಾಗಿರುವುದಿಲ್ಲ. ಮುಸ್ಲಿಂ ಎಲ್ಲರೂ ಲವ್ ಜಿಹಾದ್ ಮಾಡೋದಿಲ್ಲ ಎಂದು ಹೇಳಿದ್ದಾರೆ. ಬೇರೆ ಧರ್ಮದವರನ್ನು ಇಷ್ಟಪಟ್ಟು ಮದುವೆಯಾಗುವುದನ್ನು ತಪ್ಪು ಎನ್ನುವ ಅರ್ಥದಲ್ಲಿ ಜನ ಮಾತನಾಡುತ್ತಿದ್ದಾರೆ, ನಾನು ಯಾರನ್ನು ಇಷ್ಟ ಪಟ್ಟೆನೋ, ಅವರನ್ನ ಮದುವೆಯಾಗಿದ್ದೇನೆ. ಪ್ರೀತಿಯಲ್ಲಿ ಜಾತಿ, ಧರ್ಮ ಅನ್ನೋದು ಇರೋದಿಲ್ಲ. ಬೇರೆ ಧರ್ಮ ಅಥವಾ ಜಾತಿಯವರನ್ನ ಮದುವೆಯಾದರೆ ಏನು ತಪ್ಪು? ಎಂದು ಪ್ರಶ್ನೆ ಮಾಡಿದ್ದಾರೆ.
ನನ್ನ ಮದುವೆಯನ್ನು ಬಹಳಷ್ಟು ಜನ ವಿರೋಧ ಮಾಡಿದ್ರು, ಕೆಲವರು ಒಪ್ಪಿಕೊಂಡರು. ನಾನು ನನ್ನ ಹುಡುಗನನ್ನು ಮತ್ತು ಮದುವೆಯನ್ನು ಒಪ್ಪಿಕೊಳ್ಳಿ ಅಂತ ಯಾವತ್ತೂ ಯಾರನ್ನು ಕೇಳಿಲ್ಲ. ಒಪ್ಪೋದು, ಬಿಡೋದು ಅವರಿಗೆ ಬಿಟ್ಟಿರೋ ವಿಚಾರ. ಆದರೆ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದೇನೆ ಎನ್ನುವ ಕಾರಣಕ್ಕೆ ಹಿಂಸೆ ನೀಡುವುದು ಸರಿಯಲ್ಲ. ನಾನು ಆಧುನಿಕ ಭಾರತದಲ್ಲಿ ಬದುಕಿದ್ದೇನೆ ಮತ್ತು ಭಾರತ ಜಾತ್ಯತೀತ ರಾಷ್ಟ್ರ ಎಂದು ಟಿ ಪ್ರಿಯಾಮಣಿ ಹೇಳಿದ್ದಾರೆ.