ಪ್ಯಾನ್ ಇಂಡಿಯಾ ಸ್ಡಾರ್ ನಟ ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾ ಬಿಡುಗಡೆ ಕಳೆದ ಶುಕ್ರವಾರ ಆಗಿದೆ. ಬಹುನಿರೀಕ್ಷಿತ ಸಿನಿಮಾ ಆಗಿದ್ದರಿಂದ ಸಹಜವಾಗಿಯೇ ನಿರೀಕ್ಷೆಗಳು ದುಪ್ಪಟ್ಟಾಗಿದ್ದವು. ಆದರೆ ಸಿನಿಮಾ ನೋಡಿದ ಪ್ರೇಕ್ಷಕರಿಂದ ದೊಡ್ಡ ಮಟ್ಟದಲ್ಲಿ ಅಸಮಾಧಾನ ಹೊರ ಬಂದಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಸಿನಿಮಾವನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಇವೆಲ್ಲವುಗಳ ನಡುವೆಯೇ ವೀಕೆಂಡ್ ನಲ್ಲಿ ಸಿನಿಮಾ ಕಲೆಕ್ಷನ್ ಜೋರಾಗಿಯೇ ಆಗಿದೆ.
ಆದರೆ ಒಂದು ಕಡೆ ಮಾತ್ರ ಸಿನಿಮಾಕ್ಕೆ ಸೋಲಿನ ಭಯ ಈಗ ಕಾಡಿದೆ. ಹೌದು, ಆದಿಪುರುಷ್ ಸಿನಿಮಾದಲ್ಲಿನ ಒಂದು ಡೈಲಾಗ್ ನಿಂದಾಗಿ ದೊಡ್ಡ ಸಮಸ್ಯೆಯೇ ಎದುರಾಗಿದೆ. ಈ ಸಿನಿಮಾದ ಸನ್ನಿವೇಶವೊಂದರಲ್ಲಿ ಸೀತೆಯನ್ನು ಭಾರತದ ಮಗಳು ಎಂದು ಹೇಳಲಾಗಿದೆ. ಇದು ನೇಪಾಳದ ಜನರಿಗೆ ಇಷ್ಟವಾಗಿಲ್ಲ. ಏಕೆಂದರೆ ಸೀತೆ ಹುಟ್ಟಿದ ಜನಕಪುರಿ ನೇಪಾಳದಲ್ಲಿದ್ದು, ಅವರ ನಂಬಿಕೆಗೆ ಈ ಸಂಭಾಷಣೆ ವಿರೋಧವಾಗಿದೆ ಎನ್ನುವುದು ಅವರ ಅಭಿಪ್ರಾಯವಾಗಿದೆ.
ಸಿನಿಮಾದಲ್ಲಿನ ಈ ಡೈಲಾಗ್ ತೆಗೆಯುವಂತೆ ನೇಪಾಳದ ರಾಜಧಾನಿ ಕಠ್ಮಂಡುವಿನ ಮೇಯರ್ ಬಲೇನ್ ಶಾ ಚಿತ್ರತಂಡಕ್ಕೆ ಸೂಚನೆ ನೀಡಿದ್ದರು. ಆದರೆ ಈ ಡೈಲಾಗ್ ಅನ್ನು ತೆಗೆಯದೇ ಹಾಗೇ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡಿದ ಬೆನ್ನಲ್ಲೇ ಮೇಯರ್ ಬಲೇನ್ ಶಾ ಈಗ ಹೊಸದೊಂದು ಆದೇಶವನ್ನು ಹೊರಡಿಸಿದ್ದಾರೆ. ಅವರ ಆದೇಶದ ಪ್ರಕಾರ ಕಠ್ಮಂಡುವಿನ ಯಾವ ಚಿತ್ರಮಂದಿರದಲ್ಲೂ ಆದಿಪುರುಷ್ ಸಿನಿಮಾವನ್ನು ಪ್ರದರ್ಶನ ಮಾಡುವಂತಿಲ್ಲ.
ಅದು ಮಾತ್ರವೇ ಅಲ್ಲದೇ ಆದಿಪುರುಷ್ ಸಿನಿಮಾದಲ್ಲಿನ ಡೈಲಾಗ್ ತೆಗೆಯುವವರೆಗೆ ಬಾಲಿವುಡ್ ನ ಎಲ್ಲಾ ಸಿನಿಮಾಗಳನ್ನು ಸಹಾ ಬ್ಯಾನ್ ಮಾಡಿದ್ದಾರೆ. ಸಿನಿಮಾದಲ್ಲಿನ ಡೈಲಾಗ್ ತೆಗೆಯಲು ಹೇಳಿದರೂ ಅದನ್ನು ತೆಗೆಯದ ಕಾರಣ ಜೂನ್ 19 ರಿಂದ ಕಠ್ಮಂಡು ಮೆಟ್ರೋ ಪಾಲಿಟನ್ ಸಿಟಿಯಲ್ಲಿ ಎಲ್ಲಾ ಹಿಂದಿ ಸಿನಿಮಾಗಳ ಪ್ರದರ್ಶನಕ್ಕೆ ನಿರ್ಬಂಧ ಹೇರಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.