ಭಾರತೀಯ ಸಿನಿಮಾ ರಂಗದಲ್ಲಿ ದೊಡ್ಡ ಸಾಹಸಮಯ ಸಿನಿಮಾ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ಮಲಯಾಳಂ ಸ್ಟಾರ್ ನಟ ಮೋಹನ್ ಲಾಲ್ (Mohan Lal) ಅಭಿನಯಿಸುತ್ತಿರುವ ವೃಷಭ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿದ್ದು, ಈ ಸಿನಿಮಾದ ಚಿತ್ರೀಕರಣ ಭಾನುವಾರದಿಂದ ಪ್ರಾರಂಭವಾಗಿದೆ. ಸಿನಿಮಾ ಘೋಷಣೆ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಸಹಾ ಹುಟ್ಟು ಹಾಕಿದೆ. ವೃಷಭ ಚಿತ್ರದಲ್ಲಿ ಪ್ರೇಕ್ಷಕರಿಗೆ ರೋಮಾಂಚನ ಉಂಟುಮಾಡುವಂತಹ ಸಾಹಸಮಯ ರೋಚಕ ದೃಶ್ಯಗಳು ಇರಲಿದೆ ಎಂದು ಸುದ್ದಿಗಳಾಗಿದ್ದು, ಸಿನಿಮಾ ಪ್ರಿಯರಿಗೆ ಸಾಕಷ್ಟು ಕುತೂಹಲವನ್ನು ಮೂಡಿಸಿದೆ.
ವೃಷಭ ಸಿನಿಮಾದಲ್ಲಿ ಮೋಹನ್ ಲಾಲ್ ಅವರ ಜೊತೆಗೆ ರೋಷನ್ ಮೇಕಾ, ಶನಾಯಾ ಕಪೂರ್, ಝಾರಾ ಖಾನ್, ಶ್ರೀಕಾಂತ್ ಮುಂತಾದವರು ತೆರೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಈಗ ಈ ಸಿನಿಮಾದ ಹೊಸ ಅಪ್ಡೇಟ್ ಒಂದು ಹೊರಗೆ ಬಂದಿದ್ದು ಎಲ್ಲರಿಗೂ ಆಶ್ಚರ್ಯವನ್ನು ಮೂಡಿಸಿದೆ. ಹೌದು, ಈ ಸಿನಿಮಾದಲ್ಲಿ ಕನ್ನಡ ನಟಿ ರಾಗಿಣಿ ದ್ವಿವೇದಿ (Ragini Dvivedi) ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಿಗೆ ಬಹಳ ಖುಷಿಯನ್ನು ನೀಡಿದ.
ನಟಿ ರಾಗಿಣಿ ದ್ವಿವೇದಿ ಕಾಂದಹಾರ್ ಸಿನಿಮಾದ ನಂತರ ಎರಡನೇ ಬಾರಿ ಮೋಹನ್ ಲಾಲ್ ಅವರ ಜೊತೆಗೆ ತೆರೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಯಶಸ್ವಿ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ನಂದ ಕಿಶೋರ್ ಮೋಹನ್ ಲಾಲ್ ಅಭಿನಯದ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ಪ್ರಾರಂಭದ ವಿಷಯವನ್ನು ನಟ ಮೋಹನ್ ಲಾಲ್ ಅವರು ಸೋಶಿಯಲ್ ಮೀಡಿಯಾಗಳ ಮೂಲಕ ಹಂಚಿಕೊಂಡಿದ್ದು, ಅಭಿಮಾನಿಗಳು ಹೊಸ ಸಿನಿಮಾಕ್ಕೆ ಶುಭ ಹಾರೈಸಿದ್ದಾರೆ.