ಪೊಲೀಸ್ ಇಲಾಖೆಯು ಶಿಸ್ತಿನ ಇಲಾಖೆಯಾಗಿದೆ. ಪೊಲೀಸ್ ಇಲಾಖೆಯಲ್ಲಿ ಸಲ್ಯೂಟ್ ಸಿಗುತ್ತದೆ, ಒದೆ ಕೂಡಾ ಸಿಗುತ್ತದೆ, ಹಾಗೆ ಮುಂದುವರೆದು ಗುಂಡು ಹಾರಿಸೋದುಬ ಇರುತ್ತದೆ. ಆದರೆ ಯಾರಿಗೆ ಯಾವುದು ಬೇಕೋ ನೀವೇ ತೀರ್ಮಾನ ಮಾಡಿ ಎಂದು ರಾಜ್ಯದ ನೂತನ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ. ಈ ಮೂಲಕ ಅವರು ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕದಡುವವರಿಗೆ ಪರೋಕ್ಷವಾಗಿ ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಿದ್ದಾರೆ.
ಗುರುವಾರ ವಿಧಾನ ಸೌಧದಲ್ಲಿ ಮಾತನಾಡಿದ ನೂತನ ಗೃಹ ಸಚಿವರು, ಲಾಟಿ ಏಟು ತಿನ್ನಬೇಕೋ? ಅಥವಾ ಗುಂಡು ಹಾರಿಸಿಕೊಳ್ಳಬೇಕೋ ಅಥವಾ ರಾಜ್ಯವನ್ನು ಶಾಂತಿಯಿಂದ ನಡೆಸಬೇಕೋ ಎನ್ನುವುದನ್ನು ಜನರೇ ತೀರ್ಮಾನ ಮಾಡಬೇಕು ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಅವರು ನಮ್ಮ ಪ್ರಣಾಳಿಕೆಯಲ್ಲಿ ಯಾರು ಶಾಂತಿಯನ್ನು ಕದಡುವರೋ, ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವರೋ ಅಂತಹವರು ವ್ಯಕ್ತಿ ಅಥವಾ ಸಂಘಟನೆ ಯಾವುದೇ ಆದರೂ ಸಹಾ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದೇವೆ.
ಒಂದು ವೇಳೆ ಅವರು ಯಾರು ಅದನ್ನು ಮಾಡಲ್ಲ ಎನ್ನುವುದಾದರೆ ಭಯ ಪಡುವ ಅಗತ್ಯವಿಲ್ಲ, ಮಾಡುತ್ತೇವೆ ಅಂದರೆ ಅವರಿಗೆ ಭಯ ಆಗುತ್ತದೆ ಎಂದಿದ್ದಾರೆ. ನಮ್ಮದು ಕುವೆಂಪು ನಾಡು, ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡುತ್ತೇವೆ. ಜನರು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಸಹಕಾರ ಕೊಡಬೇಕೆಂದು ಮನವಿ ಮಾಡಿದ್ದಾರೆ. ಅಲ್ಲದೇ ನೈತಿಕ ಪೊಲೀಸ್ ಗಿರಿ ಹಾಗೂ ಮತೀಯ ಘಟನೆಗಳನ್ನು ಸಹಿಸುವುದಿಲ್ಲ, ಹೇಗೆ ಕಠಿಣ ಕ್ರಮ ಕೈಗೊಳ್ಳಬೇಕೋ ಹಾಗೆ ಕೈಗೊಳ್ಳುತ್ತೇವೆ ಎಂದೂ ಹೇಳಿದ್ದಾರೆ