ದೇಶದಲ್ಲಿ ಭವ್ಯವಾದ ನೂತನ ಸಂಸತ್ ಭವನದ ಉದ್ಘಾಟನೆಯು ಕೆಲವೇ ದಿನಗಳ ಹಿಂದೆಯಷ್ಟೇ ಬಹಳ ವಿಜೃಂಭಣೆಯಿಂದ, ಸಾಂಪ್ರದಾಯಿಕ ವಿಧಿ ವಿಧಾನಗಳ ಮೂಲಕ ನೆರವೇರಿದೆ. ಈ ವೇಳೆ ನೂತನ ಸಂಸತ್ ನಲ್ಲಿ ಸ್ಪೀಕರ್ ಆಸನದ ಬಳಿ ರಾಜದಂಡವನ್ನು ಸ್ಥಾಪಿಸಲಾಗಿದ್ದು, ಈ ವಿಚಾರವಾಗಿ ಸಾಕಷ್ಟು ಚರ್ಚೆಗಳು ಈಗಾಗಲೇ ನಡೆದಿದೆ. ಅದರ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಆಸಕ್ತಿಯನ್ನು ಸಹಾ ಬಹಳಷ್ಟು ಜನರು ತೋರಿದ್ದಾರೆ. ಈ ರಾಜದಂಡದ ಬಗ್ಗೆ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಇದು ದೇಶದ ಶ್ರೀಮಂತ ನಾಗರಿಕತೆಯ ಪ್ರತೀಕ ಎಂದು ಟ್ವೀಟ್ ಮಾಡಿದ್ದರು.
ರಾಜದಂಡ ಅಥವಾ ಸೆಂಗೋಲ್ ನ ಇತಿಹಾಸದ ಕಡೆಗೆ ಒಮ್ಮೆ ದೃಷ್ಟಿ ಹರಿಸಿದರೆ, ಪ್ರಾಚೀನ ಭಾರತದಲ್ಲಿ ರಾಜರು ತಮ್ಮೊಂದಿಗೆ ಒಂದು ದಂಡವನ್ನು ಸಾಂಕೇತಿಕವಾಗಿ ಹಿಡಿದಿರುತ್ತಿದ್ದರು. ಇದನ್ನೇ ರಾಜದಂಡ ಎಂದು ಕರೆಯಲಾಗುತ್ತದೆ. ಯಾರು ಇದನ್ನು ಹಿಡಿಯುತ್ತಿದ್ದರೋ, ಇಡೀ ರಾಜ್ಯದ ನಿಜವಾದ ಆಡಳಿತವು ಅವರ ಆದೇಶದಂತೆ ನಡೆಯುತ್ತಿತ್ತು. ಆದ್ದರಿಂದಲೇ ಇದನ್ನು ರಾಜದಂಡ ಎಂದು ಕರೆಯಲಾಯಿತು.
ಭಾರತೀಯ ಗ್ರಂಥಗಳ ಪ್ರಕಾರ, ರಾಜರು ಮತ್ತು ಚಕ್ರವರ್ತಿಗಳು ಸಿಂಹಾಸನದ ಮೇಲೆ ಕುಳಿತಾಗ ರಾಜದಂಡವನ್ನು ಅಧಿಕಾರದ ಸಂಕೇತವಾಗಿ ಹಿಡಿಯುತ್ತಾರೆ. ಇನ್ನು ಈಗ ಸಂಸತ್ ನಲ್ಲಿ ಇರಿಸಲಾಗಿರುವ ರಾಜದಂಡದ ಬಗ್ಗೆ ಹೇಳುವುದಾದರೆ, ವಾಸ್ತವವಾಗಿ ಆಗಸ್ಟ್ 1947 ರಲ್ಲಿ , ಬ್ರಿಟೀಷರು ಭಾರತಕ್ಕೆ ಸ್ವಾತಂತ್ರ್ಯ ನೀಡುವಾಗ, ಬ್ರಿಟನ್ ನಿಂದ ಭಾರತೀಯ ನಾಯಕರಿಗೆ ಅಧಿಕಾರವನ್ನು ಹಸ್ತಾಂತರಿಸುವ ಭಾಗವಾಗಿ ಆಗಿನ ಪ್ರಧಾನಿ ನೆಹರೂ ಅವರಿಗೆ ಈ ರಾಜದಂಡವನ್ನು ನೀಡಲಾಯಿತು.
ಸೆಂಗೋಲ್ ಇದು ಚೋಳ ಸಾಮ್ರಾಜ್ಯದ ಕಾಲದ್ದು ಎನ್ನುವುದು ಇತಿಹಾಸ. ಇದನ್ನು ಇಷ್ಟು ವರ್ಷಗಳ ಕಾಲ ಪ್ರಯಾಗರಾಜ್ ಮ್ಯೂಸಿಯಂನಲ್ಲಿ ಇರಿಸಲಾಗಿತ್ತು. ಇದೀಗ ಇದು ಮತ್ತೊಮ್ಮೆ ಸಂಸತ್ತಿನ ಸ್ಪೀಕರ್ ಪೀಠದ ಬಳಿ ಸ್ಥಾನವನ್ನು ಪಡೆದಿದೆ. ರಾಜದಂಡದ ವಿಶೇಷತೆ ಏನೆಂದರೆ ಇದು ಪ್ರಾಚೀನ ಭಾರತದ ವೈಭವಕ್ಕೆ ಸಂಕೇತವಾಗಿದೆ. ಚೋಳರು ಶೈವರಾಗಿದ್ದರು, ಅವರ ಆರಾಧ್ಯ ದೈವ ಮಹಾಶಿವನು. ಆದ್ದರಿಂದಲೇ ರಾಜ ಪುರೋಹಿತರು ಈ ರಾಜ ದಂಡವನ್ನು ಮಹಾ ಶಿವನ ಆಶೀರ್ವಾದ ಎಂದು ರಾಜನಿಗೆ ನೀಡಿದ್ದರು.
ಸೆಂಗೋಲ್ ನ ಮೇಲೆ ಶಿವನ ವಾಹನವಾದ ನಂದಿಯನ್ನು ಕೆತ್ತಲಾಗಿದೆ, ಇದು ಸತ್ಯ, ನ್ಯಾಯಪ್ರಿಯತೆ ಮತ್ತು ಶಕ್ತಿಯ ಪ್ರತೀಕವಾಗಿದೆ. ನಂದಿಯ ಕೆಳಗೆ ಎರಡು ಧ್ವಜಗಳನ್ನು ಚಿತ್ರಿಸಲಾಗಿದೆ. ಇದರ ಮೇಲೆ ತಮಿಳಿನಲ್ಲಿ ಅದ್ಭುತ ವಾಕ್ಯವೊಂದನ್ನು ಬರೆಯಲಾಗಿದ್ದು, ಅದರ ಅರ್ಥ, “ದೇವರ ಆಜ್ಞೆಯಂತೆ ಭೂಮಿಯನ್ನು ಸ್ವರ್ಗದಂತೆ ಪಾಲಿಸುವನು” ಎಂದು ಅರ್ಥವನ್ನು ನೀಡುತ್ತದೆ. ರಾಜದಂಡ ಭಾರತದ ಶ್ರೇಷ್ಠ ಪರಂಪರೆಯ ಅದ್ಭುತ ಸಂಕೇತವಾಗಿದೆ.